ಕೀರ್ತನೆ 52
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ, ಮಸ್ಕೀಲ್ ರಾಗದಲ್ಲಿ ದಾವೀದನು ರಚಿಸಿದ ಪದ್ಯ.
ಬಲಿಷ್ಠನೇ, ನೀನು ಕೆಟ್ಟತನದಲ್ಲಿ ಹೆಚ್ಚಳ ಪಡುವುದೇಕೆ?
ದೇವರ ದೃಷ್ಟಿಯಲ್ಲಿ ಅಪಕೀರ್ತಿಯಾದವನೇ,
ದೇವರ ಅನಂತ ಕೃಪೆಯು ಯಾವಾಗಲೂ ಇರುವದು.
ಮೋಸ ಮಾಡುವವನೇ,
ಹದವಾದ ಕ್ಷೌರ ಕತ್ತಿಯ ಹಾಗೆ
ನಿನ್ನ ನಾಲಿಗೆಯು ಕೇಡನ್ನು ಕಲ್ಪಿಸುತ್ತದೆ.
ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ನೀನು ಪ್ರೀತಿಸುತ್ತಿ.
ಸತ್ಯವನಾಡುವುದಕ್ಕಿಂತ ಸುಳ್ಳನ್ನೇ ನೀನು ಮಾತನಾಡುತ್ತಿ.
ಮೋಸದ ನಾಲಿಗೆಯೇ,
ನಿನಗೆ ಹಾನಿಕರವಾದ ಮಾತುಗಳೇ ಇಷ್ಟ.
 
ಆದ್ದರಿಂದ ದೇವರು ನಿಶ್ಚಯವಾಗಿ ನಿನ್ನನ್ನು ನಿತ್ಯ ನಾಶಕ್ಕೆ ತರುವರು.
ದೇವರು ನಿನ್ನನ್ನು ನಿನ್ನ ವಾಸಸ್ಥಳದಿಂದ ಕಿತ್ತುಹಾಕುವರು.
ಜೀವಿತರ ದೇಶದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವರು.
ನೀತಿವಂತರು ಇದನ್ನು ಕಂಡು ಭಯಪಡುವರು.
ಅವರು ನಿನ್ನ ಬಗ್ಗೆ ನಗಾಡಿ ಹೀಗನ್ನುವರು,
“ಇಗೋ, ದೇವರನ್ನು ತನ್ನ ಬಲವನ್ನಾಗಿ ಮಾಡಿಕೊಳ್ಳದೆ,
ತನ್ನ ಅಧಿಕ ಐಶ್ವರ್ಯದಲ್ಲಿ ಭರವಸವಿಟ್ಟು
ತನ್ನ ಕೆಟ್ಟತನದಲ್ಲಿ ಬಲಗೊಂಡು ಇತರರನ್ನು ನಾಶಮಾಡಿದ
ಮನುಷ್ಯನು ಇವನೇ!”
 
ನಾನಾದರೋ ದೇವರ ಆಲಯದಲ್ಲಿರುವ
ಅಭಿವರ್ದಿಸುವ ಓಲಿವ್ ಮರದ ಹಾಗೆ ಇರುವೆನು.
ದೇವರ ಒಡಂಬಡಿಕೆಯ ಪ್ರೀತಿಯಲ್ಲಿ
ಯುಗಯುಗಾಂತರವೂ ಭರವಸವಿಟ್ಟಿರುವೆನು.
ದೇವರೇ ನಿಮ್ಮ ಉಪಕಾರಕ್ಕಾಗಿ ಯಾವಾಗಲೂ
ನಿಮ್ಮ ಭಕ್ತರ ಮುಂದೆ ನಿಮ್ಮನ್ನು ಸ್ತುತಿಸುತ್ತಿರುವೆನು.
ನಿಮ್ಮ ಹೆಸರು ಒಳ್ಳೆಯದು.
ಆದುದರಿಂದ ನಿಮ್ಮ ಹೆಸರನ್ನೇ ನಿರೀಕ್ಷಿಸಿಕೊಂಡಿರುವೆನು.