12
ಸ್ತ್ರೀ ಹಾಗೂ ಘಟಸರ್ಪ
ಪರಲೋಕದಲ್ಲಿ ಒಂದು ಮಹಾ ಸೂಚನೆಯು ಕಾಣಿಸಿತು: ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು, ಆಕೆಯ ಪಾದಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. ಆಕೆಯು ಗರ್ಭಿಣಿಯಾಗಿದ್ದು, ಪ್ರಸವವೇದನೆಯಿಂದ ನರಳುತ್ತಾ ಕೂಗುತ್ತಿದ್ದಳು. ಪರಲೋಕದಲ್ಲಿ ಮತ್ತೊಂದು ಸೂಚನೆಯು ಕಾಣಿಸಿತು. ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಅದರ ತಲೆಯ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಚೆಲ್ಲಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ, ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಅವಳ ಮುಂದೆ ನಿಂತುಕೊಂಡಿತ್ತು. ಆಕೆ, “ರಾಷ್ಟ್ರಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ”* ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ದೇವರ ಬಳಿಗೂ ಅವರ ಸಿಂಹಾಸನದ ಬಳಿಗೂ ಎತ್ತಲಾಯಿತು. ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದರು.
ಪರಲೋಕದಲ್ಲಿ ಯುದ್ಧನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡಿದರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು. ಅವರಿಗೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ, ಪರಲೋಕದೊಳಗೆ ಅವರಿಗಿರುವ ಸ್ಥಾನವನ್ನು ಕಳೆದುಕೊಂಡರು. ಭೂಲೋಕದವರನ್ನೆಲ್ಲಾ ವಂಚಿಸುತ್ತಿದ್ದ ಆ ಮಹಾ ಘಟಸರ್ಪನು ಎಂದರೆ ಪಿಶಾಚನೆಂತಲೂ ಸೈತಾನನೆಂತಲೂ ಕರೆಯಲಾದ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರನ್ನೂ ಅವನೊಂದಿಗೆ ತಳ್ಳಲಾಯಿತು.
10 ಆಗ ಪರಲೋಕದಲ್ಲಿ ಮಹಾಧ್ವನಿಯನ್ನು ಕೇಳಿದೆನು. ಅದು,
“ರಕ್ಷಣೆಯೂ ಶಕ್ತಿಯೂ ರಾಜ್ಯವೂ ಈಗ ನಮ್ಮ ದೇವರದಾದವು.
ದೇವರ ಕ್ರಿಸ್ತ ಆಗಿರುವವರ ಅಧಿಕಾರವು ಈಗ ಸ್ಥಾಪಿತವಾಯಿತು.
ಹಗಲಿರುಳು ನಮ್ಮ ಸಹೋದರರ ಮೇಲೆ,
ನಮ್ಮ ದೇವರ ಮುಂದೆ ದೂರು ಹೇಳುವ ದೂರುಗಾರನನ್ನು ತಳ್ಳಲಾಗಿದೆ.
11 ಅವರು ಮರಣದವರೆಗೆ
ತಮ್ಮ ಪ್ರಾಣವನ್ನು ಪ್ರೀತಿಸದೆ,
ಕುರಿಮರಿಯಾಗಿರುವವರ ರಕ್ತದಿಂದಲೂ
ತಮ್ಮ ಸಾಕ್ಷಿಯ ವಾಕ್ಯದಿಂದಲೂ
ಅವನನ್ನು ಜಯಿಸಿದರು.
12 ಆದ್ದರಿಂದ ಪರಲೋಕವೇ,
ಅದರಲ್ಲಿ ವಾಸಮಾಡುವವರೇ ಹರ್ಷಗೊಳ್ಳಿರಿ.
ಭೂಮಿಯೇ, ಸಮುದ್ರವೇ, ನಿಮಗೆ ದುರ್ಗತಿ! ಎನ್ನುತ್ತೇನೆ.
ಏಕೆಂದರೆ, ಪಿಶಾಚನು ತನಗಿರುವ ಕಾಲವು ಕೊಂಚವೆಂದು ತಿಳಿದು,
ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ
ಇಳಿದು ಬಂದಿದ್ದಾನೆ,”
ಎಂಬುದಾಗಿ ಹೇಳಿತು.
13 ಘಟಸರ್ಪನು ತಾನು ಭೂಮಿಗೆ ತಳ್ಳಲಾಗಿರುವುದನ್ನು ಕಂಡಾಗ, ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು. 14 ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲಾದವು. ಅಲ್ಲಿ ಆಕೆಯು ಒಂದುಕಾಲ, ಎರಡುಕಾಲ ಮತ್ತು ಅರ್ಧಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು. 15 ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಬಿಟ್ಟನು. 16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಿತು. ಅದು ಬಾಯಿತೆರೆದು, ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತು. 17 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹುಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಎಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು, ಯೇಸುವಿನ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟನು.
* 12:5 12:5 ಕೀರ್ತನೆ 2:9