7
ಕಿರ್ಯತ್ ಯಾರೀಮಿನವರು ಬಂದು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡು, ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟರು. ಅವನ ಪುತ್ರನಾದ ಎಲಿಯಾಜರನನ್ನು ಯೆಹೋವ ದೇವರ ಮಂಜೂಷವನ್ನು ಕಾಯಲು ಪ್ರತಿಷ್ಠಿಸಿದರು. ಮಂಜೂಷವು ಕಿರ್ಯತ್ ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರ್ಷಗಳಾದವು.
ಸಮುಯೇಲನು ಮಿಚ್ಪೆಯಲ್ಲಿ ಫಿಲಿಷ್ಟಿಯರನ್ನು ಸೋಲಿಸಿದ್ದು
ಆಗ, ಇಸ್ರಾಯೇಲ್ ಮನೆತನದವರೆಲ್ಲರು ಯೆಹೋವ ದೇವರಿಗೋಸ್ಕರ ಹಂಬಲಿಸಿ ಗೋಳಾಡುತ್ತಿದ್ದರು. ಆಗ ಸಮುಯೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ, “ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವ ದೇವರ ಕಡೆಗೆ ತಿರುಗಿ, ನಿಮ್ಮಲ್ಲಿರುವ ಅನ್ಯದೇವರುಗಳನ್ನೂ, ಅಷ್ಟೋರೆತನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ, ನಿಮ್ಮ ಹೃದಯವನ್ನು ಯೆಹೋವ ದೇವರಿಗೆ ಸಿದ್ಧಮಾಡಿ, ಅವರೊಬ್ಬರನ್ನೇ ಸೇವಿಸಿದರೆ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಗಳೊಳಗಿಂದ ತಪ್ಪಿಸುವರು,” ಎಂದನು. ಆಗ ಇಸ್ರಾಯೇಲರು ಬಾಳನನ್ನೂ, ಅಷ್ಟೋರೆತನ್ನೂ ತೆಗೆದುಹಾಕಿ, ಯೆಹೋವ ದೇವರೊಬ್ಬರನ್ನೇ ಸೇವಿಸಿದರು.
ಸಮುಯೇಲನು, “ನಾನು ನಿಮಗೋಸ್ಕರವಾಗಿ ಯೆಹೋವ ದೇವರನ್ನು ಪ್ರಾರ್ಥಿಸುವ ಹಾಗೆ ಇಸ್ರಾಯೇಲರನ್ನೆಲ್ಲಾ ಮಿಚ್ಪೆಯಲ್ಲಿ ಕೂಡಿಸಿಕೊಳ್ಳಿರಿ,” ಎಂದನು. ಅವರೆಲ್ಲರು ಮಿಚ್ಪೆಯಲ್ಲಿ ಒಟ್ಟಾಗಿ ಕೂಡಿಬಂದು, ಯೆಹೋವ ದೇವರ ಮುಂದೆ ನೀರು ತಂದು ಹೊಯ್ದು, ಆ ದಿವಸದಲ್ಲಿ ಉಪವಾಸ ಮಾಡಿ, “ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ” ಎಂದು ಅಲ್ಲಿ ಹೇಳಿದರು. ಸಮುಯೇಲನು ಇಸ್ರಾಯೇಲರಿಗೆ ಮಿಚ್ಪೆಯಲ್ಲಿ ನ್ಯಾಯ ತೀರಿಸುತ್ತಿದ್ದನು.
ಇಸ್ರಾಯೇಲರು ಮಿಚ್ಪೆಯಲ್ಲಿ ಕೂಡಿ ಬಂದರೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರ ಅಧಿಪತಿಗಳು ಇಸ್ರಾಯೇಲರಿಗೆ ವಿರೋಧವಾಗಿ ಏರಿ ಬಂದರು. ಆಗ ಇಸ್ರಾಯೇಲರು ಇದನ್ನು ಕೇಳಿ ಫಿಲಿಷ್ಟಿಯರಿಗೋಸ್ಕರ ಭಯಪಟ್ಟು, ಅವರು ಸಮುಯೇಲನಿಗೆ, “ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವವರೆಗೆ, ನೀನು ನಮಗೋಸ್ಕರವಾಗಿ ಪ್ರಾರ್ಥನೆಮಾಡಿ ಮೊರೆಯಿಡುವುದನ್ನು ನಿಲ್ಲಿಸಬೇಡ,” ಎಂದರು. ಆಗ ಸಮುಯೇಲನು ಹಾಲು ಕುಡಿಯುವ ಕುರಿಮರಿಯನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಪೂರ್ಣ ದಹನಬಲಿಯನ್ನು ಅರ್ಪಿಸಿದನು, ಇಸ್ರಾಯೇಲರಿಗೋಸ್ಕರ ಯೆಹೋವ ದೇವರಿಗೆ ಮೊರೆಯಿಟ್ಟನು. ಯೆಹೋವ ದೇವರು ಅವನಿಗೆ ಉತ್ತರವನ್ನು ದಯಪಾಲಿಸಿದರು.
10 ಸಮುಯೇಲನು ದಹನಬಲಿಯನ್ನು ಅರ್ಪಿಸುವಾಗ, ಫಿಲಿಷ್ಟಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಲು ಸಮೀಪಕ್ಕೆ ಬಂದರು. ಆಗ ಯೆಹೋವ ದೇವರು ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಿಂದ ಗುಡುಗಿ ಅವರನ್ನು ಕಳವಳಗೊಳಿಸಿ, ಇಸ್ರಾಯೇಲರಿಗೆ ಸೋತು ಓಡಿಹೋಗುವಂತೆ ಮಾಡಿದರು. 11 ಆಗ ಇಸ್ರಾಯೇಲರು ಮಿಚ್ಪೆಯಿಂದ ಹೊರಟು, ಫಿಲಿಷ್ಟಿಯರನ್ನು ಹಿಂದಟ್ಟಿ, ಬೇತ್ಕಾರಿನವರೆಗೂ ಅವರನ್ನು ಹೊಡೆದರು.
12 ಸಮುಯೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ, ಶೇನಿಗೂ ಮಧ್ಯದಲ್ಲಿ ನಿಲ್ಲಿಸಿ, “ಇಲ್ಲಿಯವರೆಗೂ ಯೆಹೋವ ದೇವರು ನಮಗೆ ಸಹಾಯ ಮಾಡಿದ್ದಾರೆ,” ಎಂದು ಹೇಳಿ ಅದಕ್ಕೆ ಎಬೆನೆಜೆರ್* ಎಂದು ಹೆಸರಿಟ್ಟನು.
13 ಫಿಲಿಷ್ಟಿಯರು ಸೋತುಹೋದುದರಿಂದ ಇಸ್ರಾಯೇಲಿನ ಮೇರೆಯಲ್ಲಿ ಬರಲೇ ಇಲ್ಲ. ಇದಲ್ಲದೆ ಸಮುಯೇಲನು ಇದ್ದ ದಿವಸಗಳೆಲ್ಲಾ ಯೆಹೋವ ದೇವರ ಕೈ ಫಿಲಿಷ್ಟಿಯರಿಗೆ ವಿರೋಧವಾಗಿತ್ತು. 14 ಫಿಲಿಷ್ಟಿಯರು ಇಸ್ರಾಯೇಲಿನಿಂದ ತೆಗೆದುಕೊಂಡಿದ್ದ ಎಕ್ರೋನ್ ಮೊದಲ್ಗೊಂಡು ಗತ್ ಊರಿನವರೆಗೂ ಇರುವ ಪಟ್ಟಣಗಳನ್ನು ಇಸ್ರಾಯೇಲ್ಯರು ಫಿಲಿಷ್ಟಿಯರಿಂದ ತಿರುಗಿ ತೆಗೆದುಕೊಂಡರು. ಅವುಗಳ ಮೇರೆಗಳನ್ನು ಇಸ್ರಾಯೇಲರು ಫಿಲಿಷ್ಟಿಯರ ಕೈಯಿಂದ ಬಿಡಿಸಿಕೊಂಡರು. ಇಸ್ರಾಯೇಲಿಗೂ, ಅಮೋರಿಯರಿಗೂ ಮಧ್ಯೆ ಸಮಾಧಾನ ಉಂಟಾಗಿತ್ತು.
15 ಇದಲ್ಲದೆ ಸಮುಯೇಲನು ತಾನು ಬದುಕಿದ ಎಲ್ಲಾ ದಿವಸಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು. 16 ಅವನು ಪ್ರತಿವರ್ಷ ಹೊರಟು ಬೇತೇಲನ್ನೂ, ಗಿಲ್ಗಾಲನ್ನೂ, ಮಿಚ್ಪೆಯನ್ನೂ ಸುತ್ತಿಕೊಂಡು ಹೋಗಿ ಆ ಸ್ಥಳಗಳಲ್ಲೆಲ್ಲಾ ಇಸ್ರಾಯೇಲರಿಗೆ ನ್ಯಾಯತೀರಿಸಿದನು. 17 ಆದರೆ ಅವನು ರಾಮಕ್ಕೆ ತಿರುಗಿ ಬರುತ್ತಾ ಇದ್ದನು. ಏಕೆಂದರೆ ಅಲ್ಲಿ ಅವನ ಮನೆ ಇತ್ತು, ಅಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು. ಯೆಹೋವ ದೇವರಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.
* 7:12 7:12 ಎಬೆನೆಜೆರ್ ಎಂದರೆ ಸಹಾಯದ ಕಲ್ಲು